ಕ್ಯಾಲ್‍ವರ್ಲಿ, ಚಾಲ್ರ್ಸ್ ಸ್ಟೂ ಅರ್ಟ್
1831-1884. ಆಂಗ್ಲಕವಿ ಮತ್ತು ವಿಡಂಬನಾಕಾರ. ಹುಟ್ಟಿದ್ದು ವೂಸ್ಟರ್‍ಷೈರ್‍ನ ಮಾಟ್ರ್ಲಿ. ಪಾದ್ರಿಯ ಮಗನಾದ ಈತನ ಹುಟ್ಟುಹೆಸರು ಬ್ಲಾಯ್ಡ್ಸ್. ಹೆಸರು ಬದಲಾಯಿಸಿಕೊಂಡದ್ದು 1852ರಲ್ಲಿ. ವ್ಯಂಗ್ಯೋಕ್ತಿಗಳನ್ನು ಬಳಸುವುದರಲ್ಲಿಯೂ ಆಶುಕವಿತೆಗಳನ್ನು ಕಟ್ಟಿ ಮತ್ತೊಬ್ಬರನ್ನು ಗೇಲಿ ಮಾಡುವುದರಲ್ಲಿಯೂ ಈತ ಹೆಸರಾದವ. ಈತನ ವಿದ್ಯಾಭ್ಯಾಸ ಮಾರಲ್‍ಬರ, ಹಾರೊ, ಆಕ್ಸ್‍ಫರ್ಡ್ ಮತ್ತು ಕೇಂಬ್ರಿಜ್‍ಗಳಲ್ಲಿ ನಡೆಯಿತು. ಕೆಲವೊಂದು ಹುಚ್ಚು ಸಾಹಸ, ಸ್ವೇಚ್ಛಾವರ್ತನೆಗಳಿಂದಾಗಿ ಆಕ್ಸ್‍ಫರ್ಡಿನಿಂದ ಈತನ ಉಚ್ಚಾಟನೆಯಾಯಿತು. ಅಲ್ಲಿಂದ ಕೇಂಬ್ರಿಜ್‍ನ ಕ್ರೈಸ್ಟ್ ಕಾಲೇಜು ಸೇರಿ ಸ್ಥಿರಮನಸ್ಕವಾಗಿ ವ್ಯಾಸಂಗಮಾಡಿ ಅಲ್ಲಿನ ಫೆಲೋ ಆದ. ಅನಂತರ ಲಾ ಪರೀಕ್ಷೆ ಮಾಡಿಕೊಂದು 1865ರಲ್ಲಿ ಬಾರ್‍ಗೆ ಸೇರಿದ. ಆದರೆ ಅದರ ಮರುವರ್ಷವೇ ಸ್ಕೇಟಿಂಗ್ ಅಪಘಾತದಲ್ಲಿ ಸಿಲುಕಿ ತಲೆಗೆ ಏಟು ತಿಂದು, ಸಾಯುವವರೆಗೂ ಅರೆಹುಚ್ಚನಾಗಿ ಬಾಳಿದ. ಥಯೋಕ್ರಿಟಿಸನ ಜನಪದಗೀತೆಗಳನ್ನು ಪದ್ಯಶೈಲಿಯಲ್ಲೇ ಅನುವಾದ ಮಾಡಿದುದಲ್ಲದೆ 1862ರಲ್ಲಿ ವರ್ಸಸ್ ಅಂಡ್ ಟ್ರಾನ್ಸಲೇಷನ್ಸ್ ಎಂಬ ಕೃತಿಯನ್ನೂ 1866 ಫ್ಲೈ ಲೀವ್ಸ್ ಎಂಬ ಕವನ ಸಂಕಲನವನ್ನೂ ಪ್ರಕಟಿಸಿದ. ಈ ಎರಡನೆಯ ಸಂಕಲನದ ಅಣಕವಾಡುಗಳು ಇಂಗ್ಲಿಷ್ ಸಾಹಿತ್ಯದಲ್ಲೇ ಪ್ರಸಿದ್ಧಿ ಪಡೆದವಾಗಿದೆ.							(ಎನ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ